ಕೈಗಾರಿಕಾ ರಂಗದಲ್ಲಿ ಸಂಖ್ಯಾಕಲನಶಾಸ್ತ್ರದ ವಿಧಾನಗಳು

ಇವುಗಳಲ್ಲಿ ಅತಿ ಮುಖ್ಯವಾದದ್ದು ಸಂಖ್ಯಾಕಲನೀಯ ಗುಣ ನಿಯಂತ್ರಣ(ಸ್ಟಾಟಿಸ್ಟಿಕಲ್ ಕ್ವಾಲಿಟಿ ಕಂಟ್ರೋಲ್). ಅದನ್ನು ಈ ಲೇಖನದಲ್ಲಿ ವಿಶದೀಕರಿಸಿದೆ. ಯಾವುದೇ ಎರಡು ಉತ್ಪನ್ನಗಳು ಸರ್ವಸಮವಾಗಿರುವುದು ಸಾಧ್ಯವಿಲ್ಲ ಎಂಬುದೊಂದು ಅನುಭವದ (ವಿಶೇಷವಾಗಿ ಕೈಗಾರಿಕಾ ರಂಗದಲ್ಲಿ) ಮಾತು. ಎಷ್ಟೇ ಎಚ್ಚರದಿಂದ ಅಥವಾ ಹೆಚ್ಚು ಖರ್ಚಿನಿಂದ ವಸ್ತುಗಳನ್ನು ತಯಾರಿಸಿದರೂ (ಅತಿ ನಿಷ್ಕøಷ್ಟ ದಕ್ಷತೆ ಇರುವ ಸಾಧನಗಳಿಂದ ಅಳತೆ ಮಾಡಲ್ಪಟ್ಟಾಗ್ಯೂ) ಎರಡು ವಸ್ತುಗಳ ಗುಣಲಕ್ಷಣಗಳಲ್ಲಿ ಕೊನೆಯ ಪಕ್ಷ ಮೊದಲಿನ ಅಥವಾ ಮುಂದಿನ ದಶಮಾಂಶ ಸ್ಥಾನಗಳಲ್ಲಾದರೂ ಗುಣಭೇದ ಅಥವಾ ವ್ಯತ್ಯಾಸ ಕಂಡುಬರುತ್ತದೆ. ಇದು ಅನಿವಾರ್ಯ. ಆದಕಾರಣ ನಾವು ತಯಾರುಗೊಳಿಸುವ ವಸ್ತುಗಳು ಎಷ್ಟರಮಟ್ಟಿಗೆ ನಿಖರವಾಗಿರಬೇಕು ಅಥವಾ ಸಮಾನತೆ ಹೊಂದಿರಬೇಕು ಎಂಬುದನ್ನು ಮೊದಲೇ ನಿರ್ಧರಿಸುವುದು ಉಚಿತ. ಉತ್ಪಾದನೆಯ ಬಳಿಕ ಕಂಡುಬರುವ ಈ ಗುಣಭೇದಗಳು ನಮ್ಮ ನಿತ್ಯ ಉಪಯೋಗದಲ್ಲಿ ಅಡ್ಡ ಬರದಿರಲು ವಸ್ತುಗಳು ನಿಖರವಾಗಿರಬೇಕು ಅಥವಾ ಸಮಾನತೆಯನ್ನು ಹೊಂದಿರಬೇಕು ಎಂದು ಅಸ್ಪಷ್ಟವಾಗಿ ಹೇಳುವುದಕ್ಕೆ ಬದಲಾಗಿ ಗುಣದ ಸಮಾನತೆಯ ಅಂತರದ ವ್ಯಾಪ್ತಿಯ ಪೂರ್ಣ ವಿವರಣೆ ಕೊಡುವುದು ಒಳಿತು. 

ಸ್ಥಿರವಾದ (ಸ್ಟೇಬಲ್) ಕಾರ್ಯವಿಧಾನಗಳನ್ನೊಳಗೊಂಡ (ಕೈಗಾರಿಕಾ ಅಥವಾ ಸ್ವಾಭಾವಿಕ) ಉತ್ಪನ್ನ ಕ್ಷೇತ್ರದಲ್ಲಿ ತಯಾರಾಗುವ ಯಾವುದೇ ವಸ್ತುವಿನಲ್ಲಿ (ಸಾಕಷ್ಟು ಕರಾರುವಾಕ್ಕಾಗಿ ಅಳೆದಾಗ) ಕಂಡುಬರುವ ಗುಣಭೇದ ಒಟ್ಟಾಗಿ (ಅಗ್ರಿಗೇಟ್) ಪ್ರಸಾಮಾನ್ಯ ವಿತರಣೆಯನ್ನು ಹೊಂದಿರುವುದಾಗಿ ತಿಳಿದುಬಂದಿದೆ. ಸಂಖ್ಯಾಕಲನಶಾಸ್ತ್ರಜ್ಞರ ಪರಿಭಾಷೆಯಲ್ಲಿ ಇದು ನಾರ್ಮಲ್ ಡಿಸ್ಟ್ರಿಬ್ಯೂಷನ್ ಅಥವಾ ಗೌಸಿಯನ್ ಡಿಸ್ಟ್ರಿಬ್ಯೂಷನ್. ಈ ವಿತರಣೆ ಘಂಟಾಕಾರದ ವಕ್ರವನ್ನು ಪ್ರದರ್ಶಿಸುತ್ತದೆ. ಕೈಗಾರಿಕಾ ಕ್ಷೇತ್ರದಲ್ಲಿ ಮುಖ್ಯವಾಗಿ ಗಮನಿಸಬೇಕಾದ ಅಂಶವಿದು: ಗುಣನಿಯಂತ್ರಣ ಸಾಧಿಸಿದಾಗ ಉತ್ಪಾದಿಸಿದ ವಸ್ತುಗಳನ್ನು ಒಂದನ್ನೊಂದಕ್ಕೆ ಪರಸ್ಪರ ಹೋಲಿಸಿ ನಿಖರವಾಗಿ ಅಳೆದಾಗ ಗುಣವ್ಯತ್ಯಾಸಗಳು ಕಂಡುಬಂದರೂ ಸಾಮುದಾಯಿಕವಾಗಿ ಇವನ್ನು ಪರಿಶೀಲಿಸಿದಾಗ ವ್ಯತ್ಯಾಸಗಳು ಸ್ಥಿರಪ್ರರೂಪದಲ್ಲಿರುವುದು (ಸ್ಟೇಬಲ್ ಪ್ಯಾಟರ್ನ್) ಕಂಡುಬರುತ್ತದೆ. ಸ್ಥಿರಪ್ರರೂಪವಾಗಿ ಕಂಡುಬರುವ ಭೇದವೇ ವಸ್ತುಗುಣದ ಒರೆಗಲ್ಲು ಅಥವಾ ಅಳತೆಯ ಮಾನ ಎಂದು ಧಾರಾಳವಾಗಿ ಹೇಳಬಹುದು. ನೇರವಾಗಿ ಅಳತೆ ಮಾಡಬಹುದಾದ ವಸ್ತುಗುಣಗಳಲ್ಲಿ ಭೇದಗಳು ಪ್ರಸಾಮಾನ್ಯ ವಿತರಣೆಯನ್ನು ಹೊಂದಿದ್ದರೆ ಇದು ಸಮುದಾಯದಲ್ಲಿ ಕಂಡುಬರುವ ಸ್ಥಿರಮಾದರಿ ಗುಣಭೇದದ ಸಂಕೇತ ಎಂದು ತಿಳಿಯಬಹುದು. ಅಲ್ಲದೆ ಸಮುದಾಯದ ಸರಾಸರಿ ಬೆಲೆ  ಗುಣಮಟ್ಟದ ಅಂದಾಜನ್ನು ಮಾಡುತ್ತದೆ; ಮತ್ತು ಸಮುದಾಯದ ಶಿಷ್ಟವಿಚಲನೆ   (s, ಸ್ಟಾಂಡರ್ಡ್ ಡೀವಿಯೇಷನ್) ಎಂಬ ಹೆಸರಿನ ಒಂದು ಸಾಮುದಾಯಿಕ ಮಾನ ಉತ್ಪಾದನಕ್ಷೇತ್ರದಲ್ಲಿ ಸಹಜವಾಗಿ ಕಂಡುಬರುವ ಗುಣಭೇದವನ್ನು ನಿರ್ಧರಿಸುತ್ತದೆ. ಉತ್ಪಾದನೆಯನ್ನು ಹತೋಟಿಗೊಳಿಸಿದಾಗ ತಯಾರಾದ ಎಲ್ಲ ವಸ್ತುಗಳು (99.73%)ರಷ್ಟು ಗುಣಮಾನಗಳ     ವ್ಯಾಪ್ತಿಯ ಅಂತರದಲ್ಲಿ ಇದ್ದೇ ಇರುವುವು ಎಂದು ಪೂರ್ವಭಾವೀ ಹೇಳಿಕೆ ಕೊಡಬಹುದು. ವಸ್ತುತಯಾರಿಕೆಗಾರ ಈ ವ್ಯಾಪ್ತಿಯನ್ನು ವಸ್ತುವಿನ ಶಿಷ್ಟಮಾನವಾಗಿ ಕೊಡುತ್ತಾನೆ. ಉತ್ಪಾದನೆಯ ಸಮಯದಲ್ಲಿ ಕಾರ್ಯವಿಧಾನಗಳನ್ನು ಹತೋಟಿಯಲ್ಲಿಡಲು ಹಲವಾರು ವಿಧಾನಗಳು ಬಳಕೆಯಲ್ಲಿವೆ. ಗುಣಪರೀಕ್ಷೆ ಮಾಡಲು ನಾವು ಉತ್ಪಾದನೆ ಪೂರ್ಣವಾಗುವ ತನಕ ಕಾಯಬೇಕಾದ ಅವಶ್ಯಕತೆ ಇಲ್ಲ. ಉತ್ಪಾದನೆ ನಡೆಯುತ್ತಿರುವಾಗಲೇ ಕೆಲವು ಪ್ರತಿದರ್ಶಿಗಳನ್ನು (ಸ್ಯಾಂಪಲ್ಸ್)  ಗುಣನಿಯಂತ್ರಕ ಚಿತ್ರಗಳ (ಕಂಟ್ರೋಲ್ ಚಾಟ್ರ್ಸ್) ಸಹಾಯದಿಂದ ಪರೀಕ್ಷಿಸಿ ಸ್ಥಿರವಾದ ಕಾರಣಗಳು ಮಾತ್ರ ಗುಣಭೇದದಲ್ಲಿ ಪ್ರಭಾವ ಬೀರುತ್ತಿವೆಯೇ ಎಂದು ಪರೀಕ್ಷಿಸಲಾಗುತ್ತದೆ. ಬೇರೆ ಕಾರಣಗಳೂ ಕಾರ್ಯವಿಧಾನಗಳಲ್ಲಿ ಸೇರಿಕೊಂಡು ಉತ್ಪಾದನೆಯನ್ನು ಬಾಧಿಸುತ್ತಿವೆ ಎಂದು ತೀರ್ಮಾನವಾದರೆ ಅವನ್ನು ನಿವಾರಿಸಲು ಸೂಕ್ತಕ್ರಮವನ್ನು ಕೈಗೊಳ್ಳುತ್ತಾರೆ. ಇದೇ ಸಂಖ್ಯಾಕಲನೀಯ ಗುಣ ನಿಯಂತ್ರಣ ಅತ್ಯಂತ ಮುಖ್ಯವಾದ ಮತ್ತು ಉಪಯುಕ್ತ ಕಾರ್ಯ. 

ಇತರ ಕೆಲವು ವಿಧಾನಗಳನ್ನು ಮುಂದೆ ವಿವರಿಸಿದೆ. ವಸ್ತುಗುಣವನ್ನು ಅಳತೆ ಮಾಡಲು ಸಾಧ್ಯವಿಲ್ಲದಾಗ ಮತ್ತು ತಯಾರಿಸಿದ ವಸ್ತುಗಳನ್ನು ಸಮರ್ಪಕವಾದವು ಮತ್ತು ಅಸಮರ್ಪಕವಾದವು ಎಂದು ಮಾತ್ರ ವಿಂಗಡಿಸಿದ್ದಾಗ ಸೂಕ್ತ ಅಂತರದಲ್ಲಿ ಮಾದರಿಗಳನ್ನು  ಆಯ್ಕೆ ಮಾಡಿ ಅಸಮರ್ಪಕವಾದವುಗಳ ಪ್ರಮಾಣವನ್ನು ನಿಯಂತ್ರಣ ಚಿತ್ರದ ಮೇಲೆ ಪರಿಶೀಲಿಸಿ ಈ ಪ್ರಮಾಣ ನಿರ್ಣೀತವಾಗಿ ಇರುವುದನ್ನು ಅಥವಾ ಇಲ್ಲದಿರುವುದನ್ನು ಹೇಳಬಹುದು.  ಇದೇ ರೀತಿ, ತಯಾರಿಸಿದ ಒಂದೇ ವಸ್ತುವಿನ ಗಾತ್ರ ಅಥವಾ ಕ್ಷೇತ್ರದಲ್ಲಿ ಹಲವಾರು ದೋಷಗಳನ್ನು ಅಥವಾ ಕಳಂಕಗಳನ್ನು ಎಣಿಸಿದ ಸಂದರ್ಭದಲ್ಲೂ (ಉದಾಹರಣೆಗೆ ಗಾಜಿನ ಮೇಲ್ಭಾಗದಲ್ಲಿ ಕಂಡುಬರುವಂಥ ಪ್ರಹಾರದ ಕುಳಿಗಳು) ಗುಣನಿಯಂತ್ರಣ ಸಾಧಿಸುವ ಬಗೆಗಳು ನಮಗೆ ತಿಳಿದಿವೆ. 

ಅಂಗೀಕಾರ ಪ್ರತಿಚಯನ (ಅಕ್ಸೆಪ್ಟೆನ್ಸ್ ಸ್ಯಾಂಪ್ಲಿಂಗ್): ವಸ್ತುಗಳನ್ನು ರಾಶಿಗಳಲ್ಲಿ ಕೊಂಡಾಗ ರಾಶಿಗಳನ್ನು ಸ್ವೀಕರಿಸಲು ಅಥವಾ ತಿರಸ್ಕರಿಸಲು ಅನುಸರಿಸಬೇಕಾದ ವಿಧಾನಗಳನ್ನು ವಿಧಿಸಲು ಸಂಖ್ಯಾಕಲನಶಾಸ್ತ್ರ ವಿಧಾನಗಳು ಉಪಯೋಗಕ್ಕೆ ಬರುತ್ತವೆ. ಕೆಲವೊಮ್ಮೆ ಒಂದು ರಾಶಿಯನ್ನು ಒಪ್ಪುವುದು ಅಥವಾ ತಿರಸ್ಕರಿಸುವುದು ತಯಾರಿಕೆಯ ಪ್ರಗತಿಪಥದಲ್ಲಿ ಮುಂದಿನ ಹಂತ ಎನಿಸಿಕೊಳ್ಳುತ್ತದೆ. ಒಮ್ಮೊಮ್ಮೆ ತಿರಸ್ಕರಿಸಿದ ರಾಶಿಯನ್ನು ಕೆಲಸಕ್ಕೆ ಬಾರದ್ದೆಂದು ತ್ಯಜಿಸಬೇಕಾಗುತ್ತದೆ ಮತ್ತೆ ಕೆಲವು ಬಾರಿ ತಿರಸ್ಕರಿಸಿದ ರಾಶಿಯಿಂದ ವಸ್ತುಗಳನ್ನು ಒಂದೊಂದಾಗಿ ಪರೀಕ್ಷಿಸಿ ಯೋಗ್ಯವಾದವುಗಳನ್ನು ಮಾತ್ರ ಆಯ್ದಿರಿಸಿಕೊಂಡು ಉಳಿದವುಗಳನ್ನು ಹಿಂತಿರುಗಿಸಬೇಕಾಗುತ್ತದೆ ಅಥವಾ ನಿರುಪಯುಕ್ತವಾದವುಗಳೆಂದು ತೀರ್ಮಾನಿಸಬೇಕಾಗುತ್ತದೆ. ಒದಗಿಸಿದ ವಸ್ತುಗಳ ರಾಶಿ ಸಮರೂಪವಾಗಿದ್ದಲ್ಲಿ (ಹೊಮೊಜೀನಿಯಸ್) ಸಂಖ್ಯಾಕಲನಶಾಸ್ತ್ರದ ವಿಧಾನಗಳು ಬಳಕೆದಾರನಿಗೂ ಸರಬರಾಜುಗಾರನಿಗೂ ನ್ಯಾಯವಾದ ವ್ಯವಹಾರ ದೊರಕಿಸಿಕೊಡುವುದರಲ್ಲಿ ಸಹಾಯಕವಾಗುತ್ತವೆ. ಸರ್ವಸಾಧಾರಣವಾಗಿ ನಿರ್ಮಾಣ ಸಂಸ್ಥೆಗಳಲ್ಲಿ ತಂತ್ರಜ್ಞರಿಗೆ ಸಮರೂಪದ ರಾಶಿಗಳನ್ನು ತಯಾರಿಸುವುದು ತಿಳಿದ ವಿಷಯ. ಇಂಥ ಸಂದರ್ಭಗಳಲ್ಲಿ ಅಂಗೀಕಾರ ನಿದರ್ಶನ ವಿಧಾನಗಳು ಬಹುವಾಗಿ ಉಪಯೋಗಕ್ಕೆ ಬರುತ್ತವೆ. ವಸ್ತುಗುಣವನ್ನು ಅಳೆದಾಗ ಅಥವಾ ವರ್ಗೀಕರಿಸಿದಾಗ ಉಪಯೋಗಕ್ಕೆ ಬರಬಹುದಾದ ಅನೇಕ ನಿದರ್ಶನ ವಿಧಾನಗಳು ಮುದ್ರಿತ ಕೋಷ್ಟಕಗಳಲ್ಲಿ ದೊರೆಯುತ್ತವೆ. 

ಪ್ರಯೋಗ ಆಲೇಖಗಳು : ಸಂಖ್ಯಾಕಲನಶಾಸ್ತ್ರ ವಿಧಾನಗಳಲ್ಲಿ ಜನಪ್ರಿಯ ಪ್ರಯೋಗ ಆಲೇಖಗಳು ಕೈಗಾರಿಕೆಯಲ್ಲಿ ಅದರಲ್ಲೂ ಸಂಶೋಧನೆ ಮತ್ತು ಮಾರ್ಗದರ್ಶಕ ಯೋಜನೆಗಳಲ್ಲಿ ವ್ಯಾಪಕವಾಗಿ ಉಪಯೋಗಕ್ಕೆ ಬರುತ್ತವೆ. ಎ¯್ಲ ಮಾದರಿಗಳ ಭೇದಗಳನ್ನು ಆರಂಭದಲ್ಲೇ ಪರೀಕ್ಷಿಸಬೇಕಾದಾಗ ಸೂಕ್ತವೆನಿಸಿದ ಪ್ರಯೋಗ ತಂತ್ರಗಳನ್ನು ಬಳಸುವುದರ ಜೊತೆಯಲ್ಲೇ ಭೇದ ವಿಶ್ಲೇಷಣೆಯಂಥ (ಅನಾಲಿಸಿಸ್ ಆಫ್ ವೇರಿಯನ್ಸ್) ಸಂಬಂಧಪಟ್ಟ ತಂತ್ರಗಳನ್ನು ಬಳಸುವುದು ಸಹ ಪ್ರಯೋಜನಕಾರಿ ಎಂಬುದು ಮನದಟ್ಟಾಗಿದೆ. ಕೈಗಾರಿಕಾ ಪ್ರಯೋಗ ತಂತ್ರಗಳಲ್ಲಿ ಸಾಮಾನ್ಯವಾಗಿ ಉಪಯೋಗಿಸುವ ಸಾರ್ಥಕತಾ ಪರೀಕ್ಷೆಗಳು (ಟೆಸ್ಸ್ಟ್ ಆಫ್ ಸಿಗ್ನಿಫಿಕೆನ್ಸ್) ಈ ದಿಶೆಯಲ್ಲಿ ಬಹುವಾಗಿ ಉಪಯೋಗವಾಗುತ್ತವೆ. 

ಹಿಂಚಲನೆಯ ವಿಶ್ಲೇಷಣೆ (ರಿಗ್ರೆಷನ್ ಅನಾಲಿಸಿಸ್) : ವಿದ್ಯುದ್ದೀಪದ ಒಳಗಿನ ತಂತುವಿನ ಉದ್ದಕ್ಕೂ ಅದರ ಬಾಳಿಕೆ ಗಂಟೆಗಳಿಗೂ ಪರಸ್ಪರ ಸಂಬಂಧವಿರುವಂತೆ ಕೆಲವು ಪರಿಸ್ಥಿತಿಗಳಲ್ಲಿ ವಸ್ತುವಿನ ಗುಣಲಕ್ಷಣಗಳಲ್ಲಿ ಸಂಬಂಧವಿರುವುದು ಕಂಡುಬರುತ್ತದೆ. ಇಂಥ ಸಂದರ್ಭಗಳಲ್ಲಿ ಎರಡು ಗುಣಗಳ ವೀಕ್ಷಿತ ಫಲಗಳನ್ನು ಗ್ರಾಫ್ ಕಾಗದದ ಮೇಲೆ ಕ್ಷಿತಿಜೀಯ ಅಕ್ಷದಲ್ಲಿ ಒಂದು ಗುಣವನ್ನು ಮತ್ತು ಲಂಬ ಅಕ್ಷದಲ್ಲಿ ಮತ್ತೊಂದು ಗುಣವನ್ನು ಜೊತೆ ಬಿಂದುಗಳಾಗಿ ಗುರುತಿಸುವುದರ ಮೂಲಕ ಚದರಿಕೆ ಚಿತ್ರವನ್ನು ಪಡೆಯಬಹುದು. ಇದೇ ರೀತಿಯಲ್ಲಿ ಎಲ್ಲಾ ವೀಕ್ಷಿತ ಫಲಗಳನ್ನು ಗುರುತಿಸುವುದರಿಂದ ಗುಣಗಳಿಗಿರಬಹುದಾದ ಪರಸ್ಪರ ಸಂಬಂಧ ನಮಗೆ ತಿಳಿಯುತ್ತವೆ. ಈ ಸಂಬಂಧವನ್ನು ಮತ್ತಷ್ಟು ವಿಶದವಾಗಿ ಹಿಂಚಲನೆಯ ವಿಶ್ಲೇಷಣೆ ಎಂಬ ವಿಶೇಷ ಸಂಖ್ಯಾಕಲನಶಾಸ್ತ್ರ ವಿಧಾನದಿಂದ ಪರೀಕ್ಷಿಸುತ್ತೇವೆ. ಒಂದು ಗುಣದಿಂದ ಮತ್ತೊಂದನ್ನು ಅಳೆಯಲು ಈ ಪರಿಶೀಲನೆಗಳು ಸಹಕಾರಿಯಾಗುತ್ತವೆ. ಎರಡಕ್ಕಿಂತ ಹೆಚ್ಚಾಗಿ ಗುಣಗಳಲ್ಲಿ ಸಂಬಂಧ ಕಂಡುಬಂದರೆ ಬಹುಚಕ ವಿಶ್ಲೇಷಣ ವಿಧಾನಗಳು ಸಹಾಯಕವಾಗುತ್ತವೆ. 

ಸಂಖ್ಯಾಕಲನಶಾಸ್ತ್ರದಲ್ಲಿ ಬೆಳೆದಿರುವ ಎಲ್ಲಾ ವಿಧಾನಗಳನ್ನು ಕೈಗಾರಿಕೆಗಳ ದೋಷ ನಿವಾರಣೆಯಲ್ಲಿ ಉಪಯೋಗಿಸಬಹುದು. ಆದರೆ ಮೇಲೆ ವಿವರಿಸಿದ ಕೆಲವು ವಿಧಾನಗಳು ಮಾತ್ರ ಸಾಮಾನ್ಯವಾಗಿ ಬಳಕೆಗೆ ಬಂದಿವೆ. ಸಾಮುದಾಯಿಕ ಗುಣನಿಯಂತ್ರಣ ತಂತ್ರಗಳು ಕೈಗಾರಿಕೆಗಳಲ್ಲಿ ಬಹಳವಾಗಿ ಉಪಯೋಗದಲ್ಲಿದೆ. ಇವನ್ನು ಬಿಟ್ಟರೆ ರೂಢಿಯಲ್ಲಿರುವ ವಿಧಾನಗಳೆಂದರೆ ಅಂಗೀಕಾರ ಪ್ರತಿಚಯನ, ಪ್ರಯೋಗ ಆಲೇಖಗಳು, ಹಿಂಚಲನೆಯ ವಿಶ್ಲೇಷಣೆ ಮತ್ತು ಇನ್ನು ಕೆಲವು ವಿಧಾನಗಳು ಎಂದು ಹೇಳಬಹುದು.     											     (ಎಸ್.ಕೆ.ಇ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ